ಕೊಲಿಕ್ ಒಂದು ವಿವರಿಸಲಾಗದ ನಿರಂತರ ಅಳುವಾಗಿದ್ದು, ದಿನಕ್ಕೆ ಮೂರು ಗಂಟೆಗಳಿಗಿಂತ ಹೆಚ್ಚು ಕಾಲ ಮತ್ತು ವಾರದಲ್ಲಿ ಮೂರಕ್ಕಿಂತ ಹೆಚ್ಚು ದಿನ ಇರುತ್ತದೆ. ಪುನರಾವರ್ತಿತ ಅಳು, ಕಿರಿಕಿರಿಯುಂಟುಮಾಡುವುದು, ನೋವಿನಲ್ಲಿರುವಂತೆ ಅಳು ಮತ್ತು ಯಾವುದೇ ಕಾರಣವಿಲ್ಲದ, ಸಮಾಧಾನ ಮಾಡಲಾಗದಂತಹ ನಿರಂತರ ಅಳು ಕೊಲಿಕ್ ಆಗಿರಬಹುದು. ಸುಮಾರು 25 ಪ್ರತಿಶತದಷ್ಟು ಕೊಲಿಕ್ ಇರುವ ಶಿಶುಗಳು ಈ ವಿವರಣೆಯಲ್ಲಿ ಹೇಳಿದಂತೆ ಅಳುವ ಲಕ್ಷಣಗಳನ್ನು ಹೊಂದಿರುತ್ತಾರೆ. ಹುಟ್ಟಿದ ನಂತರ 2 ರಿಂದ 3 ವಾರಗಳ ನಂತರ ಕೊಲಿಕ್ ಅನ್ನು ಗಮನಿಸಬಹುದು, 6 ರಿಂದ 8 ವಾರಗಳವರೆಗೆ ಇದು ತೀವ್ರ ರೂಪ ಪಡೆಯುತ್ತದೆ, ಮತ್ತು 3 ರಿಂದ 4 ತಿಂಗಳ ನಂತರ ಪೂರ್ತಿಯಾಗಿ ಕಡಿಮೆ ಆಗುತ್ತದೆ.
ಕೊಲಿಕ್ ಎಂದರೇನು?
ನಿಮ್ಮ ಶಿಶುವಿನ ಅಳು ಏಕೆ ಬೇರೆ ಶಿಶುಗಳಿಂದ ಭಿನ್ನವಾಗಿದೆ? ಕೊಲಿಕ್ ಅಳುವಿನ-ಅವಧಿ ಮತ್ತು ಅಳುವಿನ ತೀವ್ರತೆಯಿಂದ ಗುರುತಿಸಬಹುದಾಗಿದೆ. ವೈದ್ಯರು ಕೊಲಿಕ್ ನ ಕಾರಣಗಳನ್ನು ತಿಳಿದಿಕೊಳ್ಳಲು ಪ್ರಯಾಸ ಪಟ್ಟಿದ್ದಾರೆ ಆದರೆ ಇನ್ನೂವರೆಗೂ ಯಾವುದೇ ಫಲಿತಾಂಶ ಅವರಿಗೆ ದೊರಕಿಲ್ಲ ಹೀಗಾಗಿ ಶಿಶುಗಳಲ್ಲಿ ರೋಗನಿರ್ಣಯ ಮಾಡುವುದು ಅವರಿಗೆ ಕೊಂಚ ಕಷ್ಟ ಆಗಬಹುದು. ಕೆಲವು ವೈದ್ಯರು ಕೊಲಿಕ್ ನ ವಿವರಣೆಯನ್ನು "ಹೆಚ್ಚು-ಬೇಡಿಕೆ ಶಿಶುಗಳು" ಅಥವಾ "ಅಪಕ್ವವಾದ ನರಮಂಡಲ" ಎಂದು ಡಿಕೋಡ್ ಮಾಡಲು ಪ್ರಯತ್ನಿಸಿದ್ದಾರೆ.
ಮೊದಲು ಇದನ್ನು ಜೀರ್ಣಾಂಗ ವ್ಯವಸ್ಥೆಯಲ್ಲಿನ ತೊಂದರೆ ಎಂದು ನಂಬಲಾಗಿತ್ತು, ಏಕೆಂದರೆ ಹಲವು ಕೊಲಿಕ್ ಶಿಶುಗಳು ಆಗಾಗ್ಗೆ ತಮ್ಮ ಕಾಲುಗಳನ್ನು ಎತ್ತಿ ನೋವು ಇರುವಂತೆ ಕೂಗುತ್ತಾರೆ, ಆದರೆ, ಹೊಟ್ಟೆ ನೋವು ಮತ್ತು ಕೊಲಿಕ್ ನಡುವಿನ ಯಾವುದೇ ಸಂಬಂಧ ಸಾಬೀತಾಗಿಲ್ಲ. ಕೊಲಿಕ್ ಮಕ್ಕಳಿಗೆ ಗ್ಯಾಸ್ ಇರಬಹುದು ಆದರೆ ಇದು ಮಕ್ಕಳು ಅಳುವುದರ ಪರಿಣಾಮವಾಗಿ ಆಗುತ್ತದೆ ಆದರೆ ಮಗು ಗ್ಯಾಸ್ ಆಗಿರುವದರಿಂದ ಅಳುತ್ತಿದೆ ಎನ್ನುವುದು ಒಂದು ಮಿಥ್ಯ.
ಕೆಲವು ತಜ್ಞರು ಇದನ್ನು ಮಗುವಿನ ಜನ್ಮಜಾತ ವ್ಯಕ್ತಿತ್ವ ಮತ್ತು ಹೊಸ ಜಗತ್ತಿನ ಪ್ರಚೋದನೆಯನ್ನು ನಿಭಾಯಿಸಲು ಸಾಧ್ಯವಾಗದ ಅವ್ಯವಸ್ಥೆಯ ಅಪಕ್ವವಾದ ನರಮಂಡಲದ ಸಂಯೋಜನೆ ಎಂದು ನಂಬುತ್ತಾರೆ. ಇದರ ಅರ್ಥವೇನೆಂದರೆ, ಮಗುವಿಗೆ ಆಹಾರ ನೀಡುವುದು ಅಥವಾ ಸಮಾಧಾನ ಪಡಿಸುವುದು ಸೇರಿದಂತೆ, ಅತಿ ಸಣ್ಣ ಸಂಗತಿಗಳಿಂದಲೂ ಮಕ್ಕಳು ಗಾಬರಿಗೊಳಗಾಗುತ್ತಾರೆ. ಈ ಸಂದರ್ಭಗಳಲ್ಲಿ, ನೀವು ಮಗುವಿಗೆ ಹೆಚ್ಚು ಆರೈಕೆ ಮಾಡಿದಷ್ಟು ಹೆಚ್ಚು ಅಳಲಾರಂಭಿಸುತ್ತದೆ.
ಇದು ಕೊಲಿಕ್ ಎಂದು ನಿಮಗೆ ಹೇಗೆ ತಿಳಿಯಬಹುದು?
ಮನೆಗೆ ಬಂದ ಅಥಿತಿಯ ಭೇಟಿಯಿಂದ ನಿಮ್ಮ ಮಗು ಅಳಲಾರಂಭಿಸಿತೇ? ನೀವು ಮನೆಯ ಕೆಲಸದಲ್ಲಿ ತೊಡಗಿದಾಗ ಹಠಾತ್ತನೆ ನಿಮ್ಮ ಮಗು ಅಳು ಶುರು ಮಾಡಿತೇ? ತುಂಬಾ ಯೋಚಿಸಬೇಡಿ, ಇದಕ್ಕೆ ನೀವು ಅಥವಾ ಮನೆಗೆ ಬಂದ ಅಥಿತಿ ಹೊಣೆ ಇಲ್ಲ. ನೀವು ಸರಿಯಾಗಿ ಗಮನಿಸಿದರೆ, ನಿಮಗೆ ಮಗುವಿನ ಅಳು ಒಂದು ಪ್ಯಾಟರ್ನ್ ಅಥವಾ ನಮೂನೆ ಹೊಂದಿದೆ ಎಂದು ತಿಳಿಯುತ್ತದೆ.
ಕೊಲಿಕ್ ಇರುವ ಹೆಚ್ಚಿನ ಮಕ್ಕಳು ಪ್ರತಿ ಸಂಜೆ ಒಂದು ನಿರ್ಧಾರಿತ ಸಮಯದಲ್ಲಿ ಸಮಾಧಾನ ಪಡಿಸಲಾಗದಷ್ಟು ಅಳಲು ಶುರು ಮಾಡುತ್ತಾರೆ. ಮಗುವಿನ ಅಳುವ ವೈಖರಿ ಬಗ್ಗೆ ಗಮನ ಕೊಡಿ. ಕೊಲಿಕ್ ಇರುವ ಮಕ್ಕಳು ನೋವಿನಲ್ಲಿ ಇರುವಂತೆ ಅಳುತ್ತವೆ. ನೀವು ಎತ್ತಿಕೊಂಡಾಗ ನಿಮ್ಮ ಕೈಗಿಳಿಂದ ತಪ್ಪಿಸಿಕೊಂಡು ಜಿಗಿಯಲು ಪ್ರಯತಿನಿಸುತ್ತವೆ. ನೀವು ಸಮಾಧಾನ ಮಾಡಲು ಮಾಡುವ ಪ್ರಯತ್ನಗಳಿಗೆ ಮಗು ಪ್ರತಿಕ್ರಿಯಿಸುವುದಿಲ್ಲ. ಮುಂಚೆ ಹೇಳಿದ ಹಾಗೆ ನಿಮ್ಮ ಮಗು ನೀವು ಹೆಚ್ಚು ಆರೈಕೆ ಮಾಡಿದಷ್ಟು ಹೆಚ್ಚು ಅಳಲಾರಂಭಿಸುತ್ತದೆ.
ಹಾಗಿದ್ದರೆ ಅವಳನ್ನು ಹೇಗೆ ಸಮಾಧಾನ ಪಡಿಸುವದು?
ವೈದ್ಯರಿಗೆ ಕೊಲಿಕ್ ನ ನಿಖರ ಕಾರಣಗಳು ತಿಳಿದಿಲ್ಲ ಮತ್ತು ಇದರಿಂದಾಗಿ ಯಾವುದೇ ಪ್ರಮಾಣಿತ ಔಷಧಿಗಳನ್ನು ನೀಡಲಾಗುವದಿಲ್ಲ. ಆಂಟ್ಯಾಸಿಡ್ ಔಷಧಿಗಳು, ಹೊಟ್ಟೆ ನೋವನ್ನು ನಿವಾರಿಸಲು ವಿನ್ಯಾಸಗೊಳಿಸಿದ ಔಷಧಿಗಳು, ಮತ್ತು ನೋವು ನಿವಾರಕ ಔಷಧಿಗಳು ಮಗುವಿನಲ್ಲಿ ಕೊಲಿಕ್ ನ್ನು ನಿರ್ವಹಿಸುವಲ್ಲಿ ಯಾವುದೇ ಪಾತ್ರವನ್ನು ಹೊಂದಿಲ್ಲ.
ಮಗುವಿಗೆ ಆಗಾಗ್ಗೆ ಸ್ತನಪಾನ ನೀಡುತ್ತಿರಿ. ಹಗಲಿನಲ್ಲಿ ಅವರಿಗೆ ಹತ್ತಿರವಿರಿ ಮತ್ತು ನಿಮ್ಮ ಮಗುವಿನೊಂದಿಗೆ ಹೆಚ್ಚು ನಿಕಟ-ಸ್ಪರ್ಶ ಸಂಬಂಧವನ್ನು ಬೆಳೆಸಲು ನೀವು ಅವರನ್ನು ಎತ್ತಿಕೊಂಡು ಸುತ್ತಾಡುತ್ತಿರುವಿರಿ ಎಂದು ಖಚಿತಪಡಿಸಿಕೊಳ್ಳಿ. "ಗರ್ಭವನ್ನು ಅನುಕರಿಸುವುದು" ಪರಿಣಾಮಕಾರಿ ವಿಧಾನವಾಗಿದ್ದು ಮಗು ಗರ್ಭದಲ್ಲಿ ಇರುವ ಹಾಗೆ ಭಾಸವಾಗಿ ಶಾಂತವಾಗಿರುತ್ತದೆ. ನಿಮ್ಮ ಮಗುವಿನ ಪೃಷ್ಠದ ಕೆಳಭಾಗವನ್ನು ಒಂದು ಕೈಯಿಂದ ಹಿಡಿದುಕೊಂಡು ಮತ್ತು ನಿಮ್ಮ ಇನ್ನೊಂದು ಕೈಯನ್ನು ಅವಳ ಕತ್ತಿನ ಹಿಂಭಾಗ ಹಿಡಿದಿಟ್ಟುಕೊಳ್ಳುವುದರ ಮೂಲಕ ತೂಗುತ್ತ ಗರ್ಭವನ್ನು ಮರುಸೃಷ್ಟಿಸಿ. ಆಮ್ನಿಯೋಟಿಕ್ ದ್ರವದಲ್ಲಿ ಅವಳು ಈಜುತ್ತಿರುವ ಹಾಗೆ ಭಾಸವಾಗಲು ಬೆಚ್ಚಗಿನ ನೀರಿನಿಂದ ಸ್ನಾನ ಮಾಡಿಸಿ.
ಶಾಂತವಾಗಿರಲು ನೀವು ಏನು ಮಾಡಬಹುದು?
ಶಿಶುಗಳಲ್ಲಿನ ಕೋಲಿಕ್ ಕೆಲವೊಮ್ಮೆ ನಿಮ್ಮನ್ನು ಹತಾಶಗೊಳಿಸಬಲ್ಲದು ಮತ್ತು ನಿಮ್ಮಲ್ಲಿ ಕೋಪ ಉಂಟುಮಾಡಬಹುದು. ನಿಮ್ಮ ಕೋಪವು ಪರಿಸ್ಥಿತಿಯನ್ನು ನಿಯಂತ್ರಿಸಲು ಬಿಡಬೇಡಿ. ನೀವು ಮಗುವನ್ನು ಶಾಂತಗೊಳಿಸಲು ಅವಳನ್ನು ಜೋರಾಗಿ ತೂಗುವಾದಾಗಲಿ ಅಥವಾ ಕೈಯಲ್ಲಿ ಎತ್ತಿಕೊಂಡು ಜೋರಾಗಿ ಅಲುಗಾಡಿಸುವಾದಾಗಲಿ ಮಾಡಬೇಡಿ. ಮಗುವಿನ ಮೆದುಳಿನಲ್ಲಿ ಸೂಕ್ಷ್ಮವಾದ ರಕ್ತನಾಳಗಳು ಜೋರಾಗಿ ಅಲುಗಾಡುವದರಿಂದ ತುಂಡಾಗಬಹುದು ಮತ್ತು ರಕ್ತಸ್ರಾವವಾಗಬಹುದು, ಇದರಿಂದಾಗಿ ಮಿದುಳಿನ ಹಾನಿ ಮತ್ತು ಕೆಲವೊಮ್ಮೆ ಸಾವು ಸಂಭವಿಸುತ್ತದೆ. ಶಾಂತವಾಗಿರಿ ಮತ್ತು ನಿಮ್ಮ ಮಗುವಿನಿಂದ ಕೊಂಚ ಸಮಯ ದೂರ ಹೋಗಿ. ನೀವು ಶಾಂತವಾಗಿದ್ದಿರಿ ಅಂತ ಅನಿಸಿದಾಗ ಮಾತ್ರ ಅವಳ ಬಳಿಗೆ ಹಿಂತಿರುಗಿ ನಿಮ್ಮ ಪ್ರೀತಿಯನ್ನು ನೀಡಿ.
ನೀವು ವೈದ್ಯರನ್ನು ಯಾವಾಗ ಸಂಪರ್ಕಿಸಬೇಕು?
ನಿಯಮಿತ ತಪಾಸಣೆಗಾಗಿ ನೀವು ಮೊದಲ ಎರಡು ತಿಂಗಳಲ್ಲಿ ಒಮ್ಮೆಯಾದರೂ ಅಥವಾ ಎರಡು ಬಾರಿ ನಿಮ್ಮ ವೈದ್ಯರನ್ನು ಭೇಟಿ ಮಾಡುತ್ತೀರಿ. ನಿಮ್ಮ ಕಳವಳವನ್ನು ಚರ್ಚಿಸಲು ಮತ್ತು ಶಿಶುಗಳು ಅತಿಯಾಗಿ ಅಳಲು ಕಾರಣವಾಗುವ ಯಾವುದೇ ಗಂಭೀರ ಪರಿಸ್ಥಿತಿಗಳನ್ನು ನಿರ್ಮೂಲನೆ ಮಾಡಲು ಇದು ಸೂಕ್ತ ಸಮಯ.