ಸ್ತನ್ಯಪಾನದ ಸಮಯದಲ್ಲಿ ಅಥವಾ ನಂತರ ವಿನಾ ಕಾರಣಗಳಿಂದ ನಿಮ್ಮ ಮಗು ಅಳುತ್ತಿರುವುದನ್ನು ಮತ್ತು ವಾಂತಿ ಮಾಡುತ್ತಿರುವುದನ್ನು ನೀವು ಗಮನಿಸಿದ್ದೀರಾ? ಹಾಗಿದ್ದಲ್ಲಿ, ನಿಮ್ಮ ಮಗು ಹಾಲಿನ ಜೋತೆ ಸ್ವಲ್ಪ ಗಾಳಿಯನ್ನು ಕೂಡ ಸೇವಿಸುತ್ತಿರುವುದು ಖಚಿತ. ಇದರಿಂದ ಮಗುವಿಗೆ ಹೊಟ್ಟೆ ತುಂಬಿ ಹೋದಂತೆ ಮತ್ತು ಅನಾನುಕೂಲತೆ ಅನಿಸಬಹುದು.
ಮಗು ಎದೆಹಾಲು ಕುಡಿಯುವಾಗ ಕೊಂಚ ಗಾಳಿಯನ್ನು ಕೂಡ ನುಂಗುತ್ತದೆ, ಗಾಳಿಯ ಗುಳ್ಳೆಗಳು ಹೊಟ್ಟೆಯಲ್ಲಿ ಸಿಲುಕಿಕೊಂಡಾಗ ಮಗುವಿಗೆ ಅಸಹಜತೆ ಉಂಟಾಗಬಹುದು. ಸ್ತನ್ಯಪಾನದ ನಂತರ ಮಗುವಿಗೆ ತೇಗು/ಡೆಗು ಬರುವಂತೆ ಮಾಡುವದರಿಂದ ಮಗುವಿಗೆ ಈ ಅಸಹಜತೆಯನ್ನು ದೂರ ಮಾಡಲು ಸಹಾಯ ಮಾಡಿದಂತಾಗುತ್ತದೆ.
ತೇಗು ಬರುವಂತೆ ಮಾಡುವದರಿಂದ ಹೋಟೆಯಲ್ಲಿನ ಗಾಳಿಯ ಗುಳ್ಳೆಗಳನ್ನು ತೊಲಗಿಸಬಹುದಾಗಿದೆ. ಈ ಗುಳ್ಳೆಗಳ ಜೊತೆ ಮಗು ಸ್ವಲ್ಪ ಮೊಸರು ಮಿಶ್ರಿತ ಹಾಲನ್ನು ಕೂಡ ವಾಂತಿ ಮಾಡಬಹುದು. ಆದ್ದರಿಂದ, ನಿಮ್ಮ ಜೊತೆ ಒಂದು ಒರೆಸುವ ಬಟ್ಟೆಯನ್ನು ಇಟ್ಟುಕೊಳ್ಳಿ.
ಮಗುವಿಗೆ ತೇಗು ಬರುವಂತೆ ಮಾಡುವುದು ಹೇಗೆ?
ಮಗುವನ್ನು ನಿಮ್ಮ ಭುಜಕ್ಕೆ ಒರಗಿಸಿಕೊಂಡು ಮಗುವಿನ ಬೆನ್ನ ಮೇಲೆ ನಿಧಾನವಾಗಿ ನಿಮ್ಮ ಅಂಗೈಯಿಂದ ಉಜ್ಜಿ. ಮಗುವನ್ನು ನಿಮ್ಮ ಒಂದು ತೊಡೆಯ ಮೇಲೆ ತಲೆ-ಕೆಳಗಿನ ಸ್ಥಿತಿಯಲ್ಲಿ ಮತ್ತು ತಲೆಯನ್ನು ಒಂದು ಬದಿಯಲ್ಲಿ ಇರುವಂತೆ ಮಲಗಿಸಿಕೊಂಡು ಬೆನ್ನ ಮೇಲೆ ನಿಧಾನವಾಗಿ ತಟ್ಟುವುದರಿಂದ ಕೂಡ ಈ ಗಾಳಿಯ ಗುಳ್ಳೆಗಳನ್ನು ತೊಲಗಿಸಬಹುದು. ಮಗುವನ್ನು ನಿಮ್ಮ ತೊಡೆ ಮೇಲೆ ಕುಳಿತಿರುವ ಸ್ಥಿತಿಯಲ್ಲಿ ಹಿಡಿದುಕೊಂಡು ಮತ್ತು ಒಂದು ಕೈಯಿಂದ ತಲೆಯನ್ನು ಬೆಂಬಲಿಸುವಂತೆ ಹಿಡಿದು ಬೆನ್ನ ಮೇಲೆ ಅಂಗೈಯಿಂದ ನಿಧಾನವಾಗಿ ಉಜ್ಜುವದರಿಂದ ಕೂಡ ಸಹಾಯವಾಗಬಹುದು.
ಸ್ತನ್ಯಪಾನ ಮಾಡುವಾಗ, ಒಂದೆರಡು ನಿಮಿಷಗಳ ಕಾಲ ಮಗು ಎದೆಹಾಲು ಸೇವಿಸಿದ ನಂತರ ಅಥವಾ ನೀವು ಒಂದು ಸ್ತನದಿಂದ ಮತ್ತೊಂದಕ್ಕೆ ಬದಲಾಯಿಸಿದಾಗ ಮಗುವನ್ನು ಮೇಲೆ ಹೇಳಿದ ತರಹದ ಉಜ್ಜುವುದು ಒಳ್ಳೆಯದು. ನೀವು ಬಾಟಲಿ-ಹಾಲು ನೀಡುತ್ತಿದ್ದರೆ ಪ್ರತಿ 60-90 ಮಿಲೀ ಹಾಲು ಸೇವಿಸಿದ ನಂತರ ಮಗುವಿಗೆ ತೇಗು ಬರುವಂತೆ ಸಹಾಯ ಮಾಡವುದು ಒಳ್ಳೆಯದು.
ಮಗುವಿಗೆ ತೇಗು ಬರುವಂತೆ ಸಹಾಯ ಮಾಡುವದರಿಂದ ಮಗು ಆರಾಮದಾಯಕವಾಗಿರುತ್ತದೆ ಮತ್ತು ಹೆಚ್ಚು ಹಾಲು ಕುಡಿಯಲು ಇಷ್ಟಪಡುತ್ತದೆ.